ಹೊಳೆನರಸೀಪುರ
	ಭಾರತದ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರದಲ್ಲಿ ಹಾಸನ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳೂ ಪಶ್ಚಿಮದಲ್ಲಿ ಅರಕಲಗೂಡು, ದಕ್ಷಿಣದಲ್ಲಿ ಮೈಸೂರು ಜಿಲ್ಲೆಯ ಕೃಷ್ಣರಾಜನಗರ ಮತ್ತು ಪೂರ್ವದಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕುಗಳೂ ಸುತ್ತುವರಿದಿವೆ. ಹಳ್ಳಿಮೈಸೂರು, ಹೊಳೆನರಸೀಪುರ ಮತ್ತು ಹಳೆಕೋಟೆ ಹೋಬಳಿಗಳು. 249 ಗ್ರಾಮಗಳೂ ಒಂದು ಪಟ್ಟಣವೂ ಇರುವ ಈ ತಾಲ್ಲೂಕಿನ ವಿಸ್ತೀರ್ಣ 604.4 ಚ.ಕಿಮೀ. ಜನಸಂಖ್ಯೆ 1,75,068.

	ಕೆಲವು ಸಾಮಾನ್ಯ ಬೆಟ್ಟಶ್ರೇಣಿ ಹೊಳೆನರಸೀಪುರವನ್ನು ಹಾದು ಹಾಸನ ಮತ್ತು ಚನ್ನರಾಯಪಟ್ಟಣದ ಕಡೆಗೆ ಸಾಗಿದೆ. 1,006 ಮೀಟರ್ ಎತ್ತರವಿರುವ ಮಲ್ಲಪ್ಪನಬೆಟ್ಟ ಈ ತಾಲ್ಲೂಕಿನ ಬೆಟ್ಟಗಳಲ್ಲಿ ಮುಖ್ಯವಾದದ್ದು. ಈ ತಾಲ್ಲೂಕಿನ ಹೊಳೆನರಸೀಪುರದ ಪೂರ್ವಕ್ಕೂ ದಕ್ಷಿಣಕ್ಕೂ ಹರಡಿರುವ ಪದರುಶಿಲಾಸ್ತೋಮ ಅತ್ಯಂತ ಪುರಾತನವಾದವು. ಇಲ್ಲಿನ ಶಿಲೆಗಳು ಮೂರು ಸಾವಿರ ಮಿಲಿಯನ್ ವರ್ಷಗಳಿಗೂ ಹಳೆಯದೆಂದು ಗುರುತಿಸಲಾಗಿದೆ. ಈ ಶಿಲೆಗಳಲ್ಲಿ ಅನೇಕ ಬಗೆಯ ಉಪಯುಕ್ತ ಖನಿಜಗಳು ಕಂಡುಬಂದಿವೆ. ಹೊಳೆನರಸೀಪುರದ ಸುತ್ತ 16 ಕಿಮೀ ದೂರದೊಳಗೆ ಇರುವ ಎಣ್ಣೆಹೊಳೆರಂಗಿನ ಬೆಟ್ಟ, ಕಬ್ಬೂರು, ಎಡೆಗೊಂಡನಹಳ್ಳಿ, ತಿರುಮಲಪುರ, ಮಂಗಳಾಪುರ ಸುತ್ತಲಿನಲ್ಲಿ ಕಲ್ನಾರಿನ ಗಣಿಗಳಿವೆ. ಕಲ್ನಾರನ್ನು ಶುದ್ಧಿಮಾಡಿ ಅದರಿಂದ ಸಿಮೆಂಟು-ಕಲ್ನಾರು ಸೇರಿರುವ ಹಲಗೆಗಳನ್ನು ಮಾಡಬಹುದು. ಸಾಣೆಕಾಗದ, ಸಾಣೆಕಲ್ಲು ಮಾಡಲು ಯೋಗ್ಯವಾದ ಕುರಂದ ಕಲ್ಲು ಗಾರ್ನೆಟ್ ಮತ್ತು ಸ್ಟಾರೊಲೈಟ್ ಖನಿಜಗಳು ಹೊಳೆನರಸೀಪುರದ ಸುತ್ತ ದೊರೆಯುತ್ತವೆ. ಪಿಂಗಾಣಿ ವಸ್ತು ತಯಾರಿಕೆಗೆ ಬೇಕಾಗುವ ಫೆಲ್ಸ್‍ಪಾರ್ ಖನಿಜ ಹೊಳೆನರಸೀಪುರದಿಂದ ಅರಕಲಗೂಡಿಗೆ ಹೋಗುವ ದಾರಿಯಲ್ಲಿ ವಿಶೇಷವಾಗಿ ದೊರೆಯುತ್ತದೆ. ದೊಡ್ಡಕಾಡನೂರು ಮತ್ತು ಕಬ್ಬೂರಿನ ಬಳಿ ಕಾಗೆ ಬಂಗಾರಕ್ಕಾಗಿ ತೋಡಿದ ಗಣಿಗಳಿವೆ. ಈ ಗಣಿಗಳಲ್ಲಿ ಉಪಯುಕ್ತವಾದ ಬೆರಿಲ್ ಖನಿಜವೂ ದೊರೆಯುತ್ತದೆ.     								
	(ಬಿ.ಪಿ.ಆರ್.)

	ಈ ತಾಲ್ಲೂಕಿನ ಮುಖ್ಯನದಿ ಹೇಮಾವತಿ. ಇದು ತಾಲ್ಲೂಕಿನ ವಾಯವ್ಯದಲ್ಲಿರುವ ಹನುಮನಹಳ್ಳಿಯ ದಕ್ಷಿಣದಲ್ಲಿ ತಾಲ್ಲೂಕನ್ನು ಪ್ರವೇಶಿಸಿಸುವುದು. ಮುಂದೆ ಸ್ವಲ್ಪ ದೂರ ಪೂರ್ವಾಭಿಮುಖವಾಗಿ ಹರಿದು ಅನಂತರ ಹೊಳೆನರಸೀಪುರದವರೆಗೂ ಆಗ್ನೇಯಾಭಿಮುಖವಾಗಿ ಹರಿಯುವುದು. ಅಲ್ಲಿಂದ ನದಿ ಉತ್ತರಾಭಿಮುಖವಾಗಿ ಸ್ವಲ್ಪ ದೂರ ಹರಿದು ಮತ್ತೆ ಸ್ವಲ್ಪ ದಕ್ಷಿಣಕ್ಕೆ ಬಾಗಿ ಮುಂದೆ ಈಶಾನ್ಯಾಭಿಮುಖವಾಗಿ ತಾಲ್ಲೂಕಿನ ಉತ್ತರದ ಗಡಿಯವರೆಗೂ ಹರಿದು ಉಳಿವಾಲ ಗ್ರಾಮದ ಬಳಿ ದಕ್ಷಿಣಾಭಿಮುಖವಾಗಿ ಕೋಡಿಹಳ್ಳಿಯವರೆಗೆ ತಾಲ್ಲೂಕು ಗಡಿಯಾಗಿ ಹರಿದು ಮುಂದೆ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕನ್ನು ಪ್ರವೇಶಿಸುವುದು. ಈ ನದಿಗೆ ಹೊಳೆನರಸೀಪುರದ ವಾಯುವ್ಯಕ್ಕೆ ಸು. 6 ಕಿಮೀ ದೂರದಲ್ಲಿ ಶ್ರೀರಾಮದೇವರ ಕಟ್ಟೆ ಎಂಬ ಅಣೆಕಟ್ಟು ಇದೆ. ಈ ಅಣೆಕಟ್ಟು ನೂರು ವರ್ಷಗಳಿಗಿಂತಲೂ ಹಿಂದಿನದೆಂದು ತಿಳಿದು ಬರುತ್ತದೆ. ಇಡೀ ಜಿಲ್ಲೆಯ ನೀರಾವರಿ ಪ್ರದೇಶದಲ್ಲಿ 1/3 ಭಾಗ ಈ ಕಟ್ಟೆಯ ಕಾಲುವೆ ನೀರಿನ ಆಶ್ರಯಕ್ಕೆ ಸೇರಿದೆ. ಹೇಮಾವತಿ ಯೋಜನೆಯಿಂದ ಈ ತಾಲ್ಲೂಕು ಹೆಚ್ಚಿನ ನೀರಾವರಿ ಸೌಕರ್ಯ ಪಡೆದಿದೆ. ಈ ತಾಲ್ಲೂಕಿನಲ್ಲಿ 17 ದೊಡ್ಡ ಕೆರೆಗಳೂ 277 ಚಿಕ್ಕ ಕೆರೆಗಳೂ ಇದ್ದು ವ್ಯವಸಾಯೋಪಯೋಗಿಯಾಗಿವೆ. ನಾಗರ್ತಿ ಮತ್ತು ಕಾಮಸಮುದ್ರ ನೀರೆತ್ತುವ ಯೋಜನೆಗಳಿಂದಲೂ ಸಾಕಷ್ಟು ನೀರನ್ನೊದಗಿಸಿಕೊಳ್ಳಲಾಗುತ್ತಿದೆ. ಈ ತಾಲ್ಲೂಕಿನ ಹವೆ ಹಿತಕರ. ವಾರ್ಷಿಕ ಸರಾಸರಿ ಮಳೆ 670.15 ಮಿಮೀ.

	ತಾಲ್ಲೂಕಿನಲ್ಲಿ ಮರಳುಮಿಶ್ರಿತ ಕೆಂಪುಮಣ್ಣಿನ ಭೂಮಿ ಮತ್ತು ಕೆಂಪುಮಿಶ್ರಿತ ಕಪ್ಪುಮಣ್ಣಿನ ಭೂಮಿ ಹೆಚ್ಚಾಗಿ ಕಂಡುಬರುವುದು. ಇಲ್ಲಿನ ಮುಖ್ಯಬೆಳೆ ಬತ್ತ, ರಾಗಿ, ಸೇಂಗಾ, ದ್ವಿದಳ ಧಾನ್ಯಗಳು, ಇವುಗಳ ಜೊತೆಗೆ ಜೋಳ, ಆಲೂಗೆಡ್ಡೆ, ಕಬ್ಬು, ಅಡಕೆ, ತೆಂಗು ಇವುಗಳನ್ನು ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ ಇರುವ ದೊಡ್ಡ ಕೈಗಾರಿಕೆಯೆಂದರೆ ಕಲ್ನಾರು ವಸ್ತುಗಳ ತಯಾರಿಕಾ ಕಾರ್ಖಾನೆ. ಇವಲ್ಲದೆ ತಾಲ್ಲೂಕಿನಲ್ಲಿ ಹಿಂದಿನಿಂದ ಬಂದಿರುವ ಮುಖ್ಯ ಕೈಗಾರಿಕೆಗಳಲ್ಲಿ ಗೋಣಿಚೀಲಗಳ ತಯಾರಿಕೆ, ಹತ್ತಿ, ಉಣ್ಣೆನೇಯ್ಗೆ ಮತ್ತು ಕಂಬಳಿಗಳ ತಯಾರಿಕೆಗಳನ್ನು ಹೆಸರಿಸಬಹುದು. ಬೆಂಕಿಕಡ್ಡಿಪೆಟ್ಟಿಗೆ ತಯಾರಿಕೆ, ಮರದ ವಸ್ತುಗಳ ತಯಾರಿಕೆ ಮುಂತಾದವುಗಳಿವೆ. ಮೈಸೂರು-ಹಾಸನ, ಚನ್ನರಾಯಪಟ್ಟಣ-ಹಾಸನ ರಾಜ್ಯ ಹೆದ್ದಾರಿಗಳ ಜೊತೆಗೆ ಮೈಸೂರು-ಹಾಸನ-ಅರಸೀಕೆರೆ ರೈಲುಮಾರ್ಗ ಈ ತಾಲ್ಲೂಕಿನಲ್ಲಿ ಹಾದುಹೋಗಿದೆ.

	ಹೊಳೆನರಸೀಪುರದ ಈಶಾನ್ಯಕ್ಕೆ 13 ಕಿಮೀ ದೂರದಲ್ಲಿರುವ ದೊಡ್ಡಕುಂಟೆ ಗ್ರಾಮ ಹಿಂದೆ ಒಂದು ಪಾಳೆಯಪಟ್ಟಾಗಿತ್ತು. ಆಗಿನ ಕೋಟೆ ಅವಶೇಷವನ್ನು ಈಗಲೂ ನೋಡಬಹುದು. ಇದರ ಹತ್ತಿರದಲ್ಲಿ ನಾರಾಯಣ ಅಣೆಕಟ್ಟನ್ನು ಹೆಬ್ಬಳ್ಳಕ್ಕೆ ಕಟ್ಟಿದೆ. ಹೊಳೆನರಸೀಪುರದ ದಕ್ಷಿಣಕ್ಕೆ 16 ಕಿಮೀ ದೂರದಲ್ಲಿರುವ ಹಳ್ಳಿ ಮೈಸೂರು ಹೋಬಳಿ ಕೇಂದ್ರ. ಹಾಸನ-ಮೈಸೂರು ರಸ್ತೆಯಲ್ಲಿರುವ ಈ ಗ್ರಾಮ ಹಿಂದೆ ಒಬ್ಬ ಸ್ಥಳೀಯ ರಾಜನ ಮುಖ್ಯಪಟ್ಟಣವಾಗಿತ್ತೆಂದು ತಿಳಿದುಬರುವುದು. ಇಲ್ಲಿ ಗಂಗದೊರೆ ಮಾರಸಿಂಹನ (963-74) ಕಾಲದ್ದೆನ್ನುವ ಒಂದು ವೀರಗಲ್ಲಿದೆ. ಹೊಳೆನರಸೀಪುರಕ್ಕೆ ಉತ್ತರದಲ್ಲಿ 10 ಕಿಮೀ ದೂರದಲ್ಲಿರುವ ಹರಿಹರಪುರದಲ್ಲಿ ಹೊಯ್ಸಳರ ಕಾಲದ ಚಿಕ್ಕದಾದರೂ ಸುಂದರವಾದ ಹರಿಹರೇಶ್ವರ ದೇವಾಲಯವಿದೆ. ತ್ರಿಕೂಟಾಚಲ ಮಾದರಿಯ ಈ ದೇವಾಲಯ ಪೂರ್ವಕ್ಕೆ ಮುಖ ಮಾಡಿದ್ದು ಗರ್ಭಗೃಹ, ಸುಕನಾಸಿ ಮತ್ತು ನವರಂಗದಿಂದ ಕೂಡಿದೆ. ಸುಕನಾಸಿಯ ಎರಡೂ ಕಡೆಯಲ್ಲಿ ರತಿ-ಮನ್ಮಥರ ಮೂರ್ತಿಗಳನ್ನು ಕೆತ್ತಲಾಗಿದೆ. ಈ ದೇವಾಲಯದ ಮುಖ್ಯ ಮೂರ್ತಿಗಳು ಹರಿಹರ, ಸರಸ್ವತಿ ಮತ್ತು ಅನಂತಪದ್ಮನಾಭ ಎಂದು ಹೇಳುವರು. ಆದರೆ ಮೂರ್ತಿಗಳು ದೇವಾಲಯದಲ್ಲಿ ಕಂಡು ಬರುತ್ತಿಲ್ಲ.			
	
	*
	ಹೊಳೆನರಸೀಪುರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಮೈಸೂರು-ಹಾಸನ ಮಾರ್ಗಮಧ್ಯದಲ್ಲಿ ಹಾಸನಕ್ಕೆ ಆಗ್ನೇಯದಲ್ಲಿ 33 ಕಿಮೀ ದೂರದಲ್ಲಿದೆ. ಜನಸಂಖ್ಯೆ 27,018.

	ಹೇಮಾವತಿ ನದಿಯ ಬಲದಂಡೆ ಮೇಲಿರುವ ಈ ಪಟ್ಟಣ ಸುತ್ತಲ ಗ್ರಾಮಗಳಿಗೆ ಮುಖ್ಯ ವ್ಯಾಪಾರ ಕೇಂದ್ರ. ಕಲ್ನಾರು ಕಾರ್ಖಾನೆಯೊಂದು ಪಟ್ಟಣಕ್ಕೆ ಹತ್ತಿರದಲ್ಲೇ ಇದೆ. ಕೆಲವೊಂದು ಗೃಹಕೈಗಾರಿಕೆಗಳೂ ಇಲ್ಲಿವೆ. ಈ ಪಟ್ಟಣ ಮೈಸೂರು-ಹಾಸನ-ಅರಸೀಕೆರೆ ರೈಲುಮಾರ್ಗದ ಒಂದು ಮುಖ್ಯ ರೈಲುನಿಲ್ದಾಣ.

	ಹೊಳೆನರಸೀಪುರದ ಕೋಟೆಯನ್ನು 1168ರಲ್ಲಿ ನರಸಿಂಹನಾಯಕನೆಂಬುವನು ಕಟ್ಟಿದ. ಅವನ ವಂಶದವರ ಅಧೀನದಲ್ಲಿದ್ದ ಹೊಳೆನರಸೀಪುರ 1667ರಲ್ಲಿ ಮೈಸೂರಿನ ದೊಡ್ಡದೇವರಾಜ ಒಡೆಯರ ಕೈಸೇರಿತು. ಪಟ್ಟಣದಲ್ಲಿ ಲಕ್ಷ್ಮೀನರಸಿಂಹ ದೇವಾಲಯವಿದೆ. ಇದರ ಒಳ ನವರಂಗ, ಗರ್ಭಗೃಹ ಮತ್ತು ಅಲ್ಲಿರುವ ಪ್ರತಿಮೆಗಳು ಹೊಯ್ಸಳ ಶೈಲಿಯಲ್ಲಿವೆ. ಗ್ರಾನೈಟ್ ಶಿಲೆಗಳನ್ನು ಉಪಯೋಗಿಸಲಾಗಿರುವುದರಿಂದ ದೇವಾಲಯದ ಈ ಭಾಗಗಳನ್ನು 14ನೆಯ ಶತಮಾನದಲ್ಲಿ ಕಟ್ಟಿರಬಹುದೆಂಬ ಅಭಿಪ್ರಾಯವಿದೆ. ದೇವಾಲಯದ ಹೊರ ನವರಂಗ ಹಾಗೂ ದ್ವಾರಪಾಲಕರ ವಿಗ್ರಹಗಳು ವಿಜಯನಗರ ಅರಸರ ಆಳಿಕೆಯ ಕಾಲಕ್ಕೂ ಮಹಾದ್ವಾರ ಹಾಗೂ ಮೂರು ಗೋಪುರಗಳೇ ಮೊದಲಾದುವು ಪಾಳೆಯಗಾರರ ಕಾಲಕ್ಕೂ ಸೇರಿದವೆನ್ನಲಾಗಿದೆ. ಸ್ವಾಮಿ ಸಚ್ಚಿದಾನಂದ ಸರಸ್ವತಿಯವರು ಬೆಂಗಳೂರಿನಲ್ಲಿ 1920ರಲ್ಲಿ ಸ್ಥಾಪಿಸಿದ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ 1935ರಿಂದ ಹೊಳೆನರಸೀಪುರದಲ್ಲಿ ಕೆಲಸ ಮಾಡುತ್ತಿದೆ.											
	(ಎಚ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ